ಶತಮಾನದ ಸರ್ಕಾರಿ ಆಸ್ಪತ್ರೆಯ ಅಗತ್ಯಕ್ಕೆ ಸ್ಪಂದಿಸಿದ ಕ.ರ.ವೇ (ಪ್ರವೀಣ್ ಶೆಟ್ಟಿ ಬಣ) : ಆಸ್ಪತ್ರೆಗೆ ECG ಯಂತ್ರ ಕೊಡುಗೆಯಾಗಿ ನೀಡಿದ ಉದ್ಯಮಿ ಸತೀಶ್ ಬಾಬು

ಸಕಲೇಶಪುರ : ತಾಲೂಕಿನ ಬೆಳಗೋಡು ಗ್ರಾಮೀಣ ಭಾಗದ ನೂರಾರು ಬಡ ರೋಗಿಗಳ ಪಾಲಿಗೆ ಸಂಜೀವಿನಿಯಂತಿರುವ, ಬ್ರಿಟಿಷರ ಕಾಲದ ಶತಮಾನದ ಹಳೆಯ ಬೆಳಗೋಡು ಸರಕಾರಿ ಆಸ್ಪತ್ರೆಯ ಅಗತ್ಯಕ್ಕೆ ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಶೆಟ್ಟಿ ಬಣ) ಯಶಸ್ವಿಯಾಗಿ ಸ್ಪಂದಿಸಿದೆ.
ಆಸ್ಪತ್ರೆಯಲ್ಲಿ ದಕ್ಷ ವೈದ್ಯರ ಸೇವೆ ಲಭ್ಯವಿದ್ದರೂ, ಹೃದಯ ಆರೋಗ್ಯ ತಪಾಸಣೆಗೆ (ECG) ಅತ್ಯಗತ್ಯವಾಗಿದ್ದ ಉಪಕರಣದ ಕೊರತೆ ಇತ್ತು. ಈ ಸಮಸ್ಯೆಯನ್ನು ಸ್ಥಳೀಯ ಗ್ರಾಮಸ್ಥರು ಕ.ರ.ವೇ ಸಂಘಟನೆಯ ಗಮನಕ್ಕೆ ತಂದಿದ್ದರು. ತಕ್ಷಣವೇ ಕಾರ್ಯಪ್ರವೃತ್ತರಾದ ಕ.ರ.ವೇ ಮುಖಂಡರು ದಾನಿಗಳನ್ನು ಸಂಪರ್ಕಿಸಿದರು. ಕ.ರ.ವೇ ಮನವಿಗೆ ಉದಾರವಾಗಿ ಸ್ಪಂದಿಸಿದ ಪ್ರಮುಖ ಉದ್ಯಮಿಗಳಾದ ಶ್ರೀ ಸತೀಶ್ ಬಾಬು ಅವರು ಮಾನವೀಯತೆಯ ಆಧಾರದ ಮೇಲೆ ಆಸ್ಪತ್ರೆಗೆ ನೂತನ ECG ಉಪಕರಣವನ್ನು ದಾನವಾಗಿ ನೀಡಿದ್ದಾರೆ.
ಆಸ್ಪತ್ರೆಗೆ ಉಪಕರಣ ಹಸ್ತಾಂತರಿಸುವ ಕಾರ್ಯಕ್ರಮದಲ್ಲಿ ಕ.ರ.ವೇ ತಾಲೂಕು ಅಧ್ಯಕ್ಷರಾದ ರಮೇಶ್ ಪೂಜಾರಿ, ಬೆಳಗೋಡು ಹೋಬಳಿ ಘಟಕದ ಅಧ್ಯಕ್ಷರಾದ ಬಸವರಾಜ್, ಕ.ರ.ವೇ. ಕಾರ್ಯಕರ್ತರು, ಹಳೆ ವಿದ್ಯಾರ್ಥಿ ಸಂಘದ ಸದಸ್ಯರು, ಸ್ಥಳೀಯ ಗ್ರಾಮಸ್ಥರು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.
ಗ್ರಾಮೀಣ ಭಾಗದ ಬಡ ರೋಗಿಗಳ ಆರೋಗ್ಯ ರಕ್ಷಣೆಗೆ ನೆರವಾದ ದಾನಿ ಸತೀಶ್ ಬಾಬು ಅವರಿಗೆ ಕರ್ನಾಟಕ ರಕ್ಷಣಾ ವೇದಿಕೆ ಮತ್ತು ಸ್ಥಳೀಯ ಸಾರ್ವಜನಿಕರು ತುಂಬು ಹೃದಯದ ಕೃತಜ್ಞತೆಗಳನ್ನು ಸಲ್ಲಿಸಿ ದರು.