ಅಂತ್ಯಸಂಸ್ಕಾರಕ್ಕೆ ಸಿದ್ಧತೆ ನಡೆಸುತ್ತಿದ್ದಾಗ ಕೊಲೆ ರಹಸ್ಯ ಬಯಲು: ವ್ಯಕ್ತಿಯ ಬರ್ಬರ ಹತ್ಯೆ

ಅಂತ್ಯಸಂಸ್ಕಾರಕ್ಕೆ ಸಿದ್ಧತೆ ನಡೆಸುತ್ತಿದ್ದಾಗ ಕೊಲೆ ರಹಸ್ಯ ಬಯಲು: ವ್ಯಕ್ತಿಯ ಬರ್ಬರ ಹತ್ಯೆ
ಹಾಸನ: ಜಿಲ್ಲೆಯ ಗೊರೂರು ಪೊಲೀಸ್ ಠಾಣೆ ವ್ಯಾಪ್ತಿಯ ಕಲ್ಲಹಳ್ಳಿ ಗ್ರಾಮದಲ್ಲಿ 58 ವರ್ಷದ ಮಂಜುನಾಥಸ್ವಾಮಿ ಎಂಬುವವರನ್ನು ಮಾರಕಾಸ್ತ್ರದಿಂದ ಇರಿದು ಹಾಗೂ ತಲೆಗೆ ಹೊಡೆದು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.
ಮಂಜುನಾಥಸ್ವಾಮಿ ಅವಿವಾಹಿತರಾಗಿದ್ದು, ಕಲ್ಲಹಳ್ಳಿ ಗ್ರಾಮದಲ್ಲಿ ಒಂಟಿಯಾಗಿ ವಾಸಿಸುತ್ತಿದ್ದರು. ಸುಮಾರು 15 ಎಕರೆ ಜಮೀನು ಹೊಂದಿದ್ದ ಅವರು, ಜಮೀನಿನಲ್ಲಿ ಬಿದಿರು ಬೆಳೆದಿದ್ದರು ಎನ್ನಲಾಗಿದೆ. ಸುಮಾರು 30 ವರ್ಷಗಳ ಹಿಂದೆ ಅಪಹರಣ ಪ್ರಕರಣವೊಂದರಲ್ಲಿ ಜೀವಾವಧಿ ಶಿಕ್ಷೆ ಅನುಭವಿಸಿ ಜೈಲಿನಿಂದ ಬಿಡುಗಡೆಯಾಗಿ ಬಂದಿದ್ದರು ಎಂದು ತಿಳಿದುಬಂದಿದೆ.
ಘಟನೆ ನಡೆದ ದಿನ ಬೆಳಿಗ್ಗೆ ಮಂಜುನಾಥಸ್ವಾಮಿ ಅವರ ಸ್ನೇಹಿತ ನಾಗಣ್ಣ ಮನೆಗೆ ಬಂದಿದ್ದರು. ಮನೆಯ ಹೊರಗಿನಿಂದ ಚಿಲಕ ಹಾಕಿದ್ದರಿಂದ ವಾಪಸ್ ತೆರಳಿದ್ದರು. ಇದೇ ವೇಳೆ ಮನೆಯೊಳಗೆ ಟಿವಿ ಜೋರಾಗಿ ಸದ್ದು ಮಾಡುತ್ತಿದ್ದುದನ್ನು ಗಮನಿಸಿದ ಗ್ರಾಮದ ಜಗದೀಶ್ ಕಿಟಕಿಯಿಂದ ಒಳಗೆ ನೋಡಿದ್ದಾರೆ. ಬಳಿಕ ನಾಗಣ್ಣ ಮತ್ತು ಜಗದೀಶ್ ಸೇರಿ ಚಿಲಕ ತೆಗೆದು ಮನೆಯೊಳಗೆ ಪ್ರವೇಶಿಸಿದಾಗ, ಮಂಜುನಾಥಸ್ವಾಮಿ ಕುಳಿತ ಸ್ಥಿತಿಯಲ್ಲಿ ಮೃತಪಟ್ಟಿರುವುದು ಕಂಡುಬಂದಿದೆ.
ಮೃತರು ದಪ್ಪ ದೇಹ ಹೊಂದಿದ್ದ ಕಾರಣ ಆರಂಭದಲ್ಲಿ ಹೃದಯಾಘಾತದಿಂದ ಮೃತಪಟ್ಟಿರಬಹುದು ಎಂದು ಕುಟುಂಬಸ್ಥರು ಭಾವಿಸಿದ್ದರು. ಅಂತ್ಯಸಂಸ್ಕಾರಕ್ಕೆ ಸಿದ್ಧತೆ ನಡೆಸುತ್ತಿದ್ದ ವೇಳೆ ಸಾವಿನ ಬಗ್ಗೆ ಅನುಮಾನ ಮೂಡಿದ ಹಿನ್ನೆಲೆಯಲ್ಲಿ ಪೊಲೀಸರಿಗೆ ಮಾಹಿತಿ ನೀಡಲಾಗಿದೆ.
ಸ್ಥಳಕ್ಕೆ ಆಗಮಿಸಿದ ಪೊಲೀಸರು ಮೃತದೇಹವನ್ನು ಪರಿಶೀಲಿಸಿದಾಗ, ಕತ್ತಿಗೆ ಮಾರಕಾಸ್ತ್ರದಿಂದ ಇರಿದು ಹಾಗೂ ತಲೆಗೆ ಹೊಡೆದು ಹತ್ಯೆ ಮಾಡಿರುವುದು ಬೆಳಕಿಗೆ ಬಂದಿದೆ. ಘಟನಾ ಸ್ಥಳಕ್ಕೆ ಶ್ವಾನದಳ, ಬೆರಳಚ್ಚು ತಜ್ಞರು ಹಾಗೂ ಎಸ್ಒಸಿಒ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿವೆ.
ಹತ್ಯೆಗೆ ನಿಖರ ಕಾರಣವೇನು ಮತ್ತು ಕೃತ್ಯ ಎಸಗಿದವರು ಯಾರು ಎಂಬುದನ್ನು ಪತ್ತೆಹಚ್ಚಲು ಗೊರೂರು ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಘಟನೆಯಿಂದ ಗ್ರಾಮದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.